CA Vishwanatha A
ಮಕ್ಕಳಿಗಾಗಿ ಶಾಲೆಯಲ್ಲ, ಮಕ್ಕಳಿಂದಾಗಿ ಶಾಲೆ! - ಗೌರವ ಕಾರ್ಯದರ್ಶಿಗಳ ನುಡಿ
ಮೊದಲಿಗೆ ನಾನು ಜಗದ್ಗುರುವಾದ ಶ್ರೀ ಕೃಷ್ಣ ಪರಮಾತ್ಮನಿಗೆ, ನಮ್ಮ ನೆಚ್ಚಿನ ಗುರುಗಳಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಮತ್ತು ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ವಂದಿಸುತ್ತೇನೆ. ಈ ದಿವ್ಯತ್ರಯರ ಪರಮಾನುಗ್ರಹದಿಂದ ವಿಜಯ ವಿಠ್ಠಲ ವಿದ್ಯಾ ಸಂಸ್ಥೆಯು ತನ್ನ ಸಾರ್ಥಕ 40ನೇ ವರ್ಷದ ಯಾತ್ರೆಯನ್ನು ನಡೆಸುತ್ತಿದೆ. ಇವರ ಅನುಗ್ರಹ, ಸಪ್ರೇಮ ಆಶೀರ್ವಾದ ಮುಂದೆಯೂ ಇರಲೆಂದು ನಾನು ಪ್ರಪ್ರಥಮವಾಗಿ ಪ್ರಾರ್ಥಿಸುತ್ತೇನೆ. ವಂದೇ ಗುರುಣಾಂ ಚರಣಾರವಿಂದೇ!
ಶಾಲೆಯೆಂದರೆ ಅದು ಕೇವಲ ಕಟ್ಟಡ ಉಪಕರಣಗಳಷ್ಟೇ ಅಲ್ಲ. ಶಾಲೆಯ ಆಧಾರಸ್ತಂಭವೇ ಶಿಕ್ಷಕರು. ದೈವಾನುಗ್ರಹದಿಂದ ನಮ್ಮ ಶಾಲೆ ಅತ್ಯಂತ ನಿಷ್ಠ, ದಕ್ಷ ಹಾಗೂ ಶ್ರಮಿಸುವ ಗುಣವುಳ್ಳ ಶಿಕ್ಷಕರನ್ನು ಹೊಂದಿದೆ. ಇವರ ಕಾರ್ಯ ಚಟುವಟಿಕೆಯ ಫಲವೇ ನಮ್ಮ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅಗಾಧವಾದ ಸಾಧನೆ. ಹಾಗಾಗಿ ನಾನು ನಮ್ಮ ಶಿಕ್ಷಕ ವರ್ಗದವರನ್ನು ಈ ಪರಿಶ್ರಮಕ್ಕಾಗಿ ಅಭಿನಂದಿಸುತ್ತೇನೆ ಮತ್ತು ಇದೇ ರೀತಿಯ ಸಹಕಾರವನ್ನು ಇನ್ನು ಮುಂದೆಯೂ ನಿರೀಕ್ಷಿಸುತ್ತೇನೆ. ವಿಜಯ ವಿಠ್ಠಲ ವಿದ್ಯಾ ಸಂಸ್ಥೆ, ಇದು ಆದರ್ಶ ಶಿಕ್ಷಣ ಸಂಸ್ಥೆ ಮತ್ತು ಆದರ್ಶ ಶಿಕ್ಷಕರ ಸಂಸ್ಥೆ.
ಪೋಷಕರ ನಂಬಿಕೆ, ಸಹಕಾರ ಮತ್ತು ಪ್ರೋತ್ಸಾಹವಿಲ್ಲದೆ ಶಾಲೆ ಎಂದು ಬೆಳೆಯಲಾರದು. ನಮಗೂ ನಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಪೋಷಕ ವರ್ಗವೇ ಇದೆ. ನಮ್ಮ ಮಕ್ಕಳೊಂದಿಗೆ, ನಮ್ಮ ಪೋಷಕರೂ ಸಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಪೇಕ್ಷಿಸುತ್ತಾರೆ . ಪೋಷಕರ ಸಭೆಗೆ ತಪ್ಪದೇ ಬರುತ್ತಾರೆ. ಒಟ್ಟಾರೆ ನಮ್ಮ ಶಾಲೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದು. ಅದಕ್ಕೆ ನಾನು ಆಭಾರಿ. ಹೆಮ್ಮೆಯ ಪೋಷಕರೇ ನಮ್ಮ ಸಂಸ್ಥೆಯ ಬುನಾದಿ.
ನಮ್ಮ ಶಾಲೆಯ ಜೀವಾಳವೇ ನಮ್ಮ ಮಕ್ಕಳು. ಶಿಸ್ತಿನಿಂದ ಕಲಿಯುವ, ಒಬ್ಬರಿಗೊಬ್ಬರು ಸಹಕರಿಸುವ, ಆಟ ಪಾಠಗಳಲ್ಲಿ ಮುನ್ನಡೆಯುವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಂಗೊಳಿಸುವ ಮಕ್ಕಳನ್ನು ನಮಗೆ ನೋಡುವುದೇ ಹಿತ. ಪುಟಾಣಿ ಮಕ್ಕಳು ತಮ್ಮ ಮುಗ್ಧ ನಗುವಿನಲ್ಲೇ ಸ್ವರ್ಗ ತೋರಿಸಿದರೆ, ಪ್ರೌಢ ಮಕ್ಕಳು ತಮ್ಮ ಸಾಧನೆಯಿಂದ ನಾವು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಆಟದಲ್ಲಿ, ಪಾಠದಲ್ಲಿ, ಯೋಗದಲ್ಲಿ, ಸಂಗೀತದಲ್ಲಿ, ರಸಪ್ರಶ್ನೆಯಲ್ಲಿ, ಚರ್ಚಾ ಸ್ಪರ್ಧೆಗಳಲ್ಲಿ ಎಲ್ಲೆಲ್ಲಿಯೂ ಸಾಧನೆ ಮಾಡುತ್ತಿರುವ ನಮ್ಮ ವಿಜಯ ವಿಠ್ಠಲ ವಿದ್ಯಾರ್ಥಿಗಳು ನಮ್ಮ ಹೆಮ್ಮೆ. ಮಕ್ಕಳಿಗಾಗಿ ಶಾಲೆಯಲ್ಲ, ಮಕ್ಕಳಿಂದಾಗಿ ಶಾಲೆ!
ಇಂತಹ ನಂದ ಗೋಕುಲಕ್ಕೆ ಆಡಳಿತ ಮಂಡಳಿಯ ಪ್ರತಿಯೊಬ್ಬರು ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಈಗಾಗಲೇ ಇರುವ ಉತ್ತಮ ಸೌಕರ್ಯದೊಂದಿಗೆ ಪ್ರತಿ ವರ್ಷ, ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹೊಸ ಗಣಿತದ ಲ್ಯಾಬ್, ಚೆಸ್ ಲ್ಯಾಬ್, ಯೋಗ, ಸಂಗೀತ ಕೊಠಡಿ ಹೀಗೆ ಹತ್ತು ಹಲವು ಹೊಸ ಹೊಸ ಸೌಲಭ್ಯಗಳನ್ನು ಸೇರಿಸಲಾಗುತ್ತಿದೆ. ಮಕ್ಕಳ ಏಳಿಗೆಯೇ ನಮ್ಮ ಧ್ಯೇಯ ಎಂಬಂತೆ ನಡೆಯುತ್ತಿರುವ ಎಲ್ಲಾ ಆಡಳಿತ ಮಂಡಳಿ ಸದಸ್ಯರಿಗೆ ನನ್ನ ಕೃತಜ್ಞತೆಗಳು.
ಈ ಸಂದರ್ಭದಲ್ಲಿ ನನಗೆ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತಿರುವ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಆರ್ . ವಾಸುದೇವ ಭಟ್ ರವರನ್ನು ನಾನು ಕೃತಜ್ಞತೆಯಿಂದ ವಂದಿಸುತ್ತೇನೆ. ಮತ್ತೊಮ್ಮೆ ಕೊನೆಯದಾಗಿ ಮೇಲೆ ಸ್ಮರಿಸಿದ ದಿವ್ಯತ್ರಯರಿಗೆ ಮನಸಾರೆ ವಂದಿಸುತ್ತಾ, ಈ ವಿಜಯ ವಿಠ್ಠಲ ಸಂಸ್ಥೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜದ ಕೆಲಸ ಮಾಡಲು ಅವರ ಅನುಗ್ರಹ ಬೇಡುತ್ತೇನೆ .
ಸಿಎ ವಿಶ್ವನಾಥ ಎ
ಗೌರವ ಕಾರ್ಯದರ್ಶಿಗಳು
ವಿಜಯ ವಿಠ್ಠಲ ವಿದ್ಯಾ ಸಂಸ್ಥೆಗಳು